ಫ್ಲಾರೆನ್ಸ್‍ನಗರ
ಪ್ರಸಿದ್ಧ ಪ್ರವಾಸಿ ಮತ್ತು ಕಲಾಕೇಂದ್ರ, ಕಲಾಭವನಗಳ ತವರು. ಪುಷ್ಪನಗರ, ಇಟಲಿಯ ಅತೆನ್ಸ್ ಎಂದು ಹೆಸರಾದ ಈ ನಗರ ಇಟಲಿ ದೇಶದ ಫೀರೆಂಟ್ಸಾ (ಫ್ಲಾರೆನ್ಸ) ಪ್ರಾಂತ್ಯದ ಆಡಳಿತ ಕೇಂದ್ರ. ಇಟಲಿ ಪರ್ಯಾಯದ್ವೀಪದ ಮಧ್ಯದಲ್ಲಿ ರೋಮ್ ನಗರಕ್ಕೆ ವಾಯವ್ಯದಲ್ಲಿ 223 ಕಿಮೀ ದೂರದಲ್ಲಿದೆ. ವಿಸ್ತೀರ್ಣ 102 ಚಕಿಮೀ ಮೀರಿದೆ. ಜನಸಂಖ್ಯೆ 4,84,268 (1971), ಫ್ಲಾರೆನ್ಸ್ ನಗರ ಫೈಸಾಲ್ ಗುಡ್ಡಗಳ ಬುಡದಲ್ಲಿ ಆರ್ನೊ ನದಿಯ ಫಲವತ್ತಾದ ಕಣಿವೆಯಲ್ಲಿ ನದಿಯ ಎರಡು ದಂಡೆಗಳ ಮೇಲೆ ಅಸಮಭಾಗಗಳಲ್ಲಿ ಹರಡಿದೆ. ನಗರದ ಅಧಿಕಭಾಗ ನದಿಯ ಉತ್ತರದ ದಂಡೆಯ ಮೇಲೆ ಇದೆ. ಮೊದಲು ನದಿಯ ಬಲದಂಡೆಯ ಮೇಲೆ ನಗರವಿದ್ದು ಮಧ್ಯಯುಗದಲ್ಲಿ ಅದು ಎಡದಂಡೆಗೆ ಹಬ್ಬಿತು. 1865ರಲ್ಲಿ ಪುರಾತನ ಗೊಡೆಗಳು ನೆಲಸಮವಾದಂದಿನಿಂದ ಉತ್ತರ ಮತ್ತು ಪೂರ್ವ ದಿಶೆಗಳಲ್ಲೂ ನಗರ ಬೆಳೆಯಲಾರಂಭಿಸಿದೆ. 1888ರಿಂದೀಚೆಗೆ ಯೆಹೂದ್ಯರ ವಾಸಸ್ಥಳವಾಗಿದ್ದ ಕಿರಿಯಗಲದ ನಗರ ಭಾಗ ಸುಧಾರಿಸಿದೆ. ನಗರ ಸಂಪರ್ಕಕ್ಕೆ ನೇರವಾಗಿ ನದಿಯ ಮೇಲೆ ಆರು ಕಡೆ ಸೇತುವೆಗಳನ್ನು ಕಟ್ಟಿದ್ದಾರೆ. ಇವುಗಳಲ್ಲಿ ಬಲು ಆಕರ್ಷಕವಾಗಿದ್ದ ಪುರಾತನ (1345) ಪಾಂಟೆ ವಚಿಯೋ ಸೇತುವೆಯೊಂದನ್ನು ಬಿಟ್ಟು ಉಳಿದವನ್ನು 1944ರಲ್ಲಿ ಜರ್ಮನರು ಹಾಳುಗೆಡವಿದರು. ಪಾಂಟೆವೆಚಿಯೊ ಸೇತುವೆ ವಿಚಿಯೊ ಅರಮನೆಯನ್ನು ಪಿಟ್ಟೆ ಅರಮನೆಯೊಡನೆ ಸಂಪರ್ಕಿಸುತ್ತದೆ. ಸಾಂತಾ ಟ್ರೆನಿಲಾ ಸೇತುವೆಯನ್ನು ಅಲ್ಲೆ ಮೊದಲಿದ್ದ ಸೇತುವೆಯ ರಚನಾ ಕ್ರಮಕ್ಕೆ ಅಳವಡಿಸಿ ಪುನಃ ರಚಿಸಲಾಗಿದೆ. ಫ್ಲಾರೆನ್ಸ್ ನಗರದುದ್ದಕ್ಕೂ ಆರ್ನೊನದಿ ಕಿರಿಯಗಲದಲ್ಲಿ ಹರಿಯುವುದು. ಬಲಾನ ಮತ್ತು ಫಾಯೆನ್‍ಜಗಳಿಗೆ ಹೋಗುವ ಮೂರು ಅಪನೈನ್ ಮಧ್ಯ ಇಟಲಿಯ ಮುಖ್ಯ ಸಂಚರಣ ಕೇಂದ್ರಗಳಲ್ಲೊಂದಾಯಿತು. ನಗರದ ಲಾಂಛನ ಹೂವಿನ ಚಿತ್ರ, ಫ್ಲಾರೆನ್ಸ್ ನಗರದ ಒಳರಚನೆ ಹೆಚ್ಚು ಕಡಿಮೆ ರೋಮನ್ನರ ಮ್ಯುನಸಿಪಿಯಮ್ನನ್ನು ಹೋಲುತ್ತದೆ. ರೋಮನ್ನರ ಕಾಲದ ವಾಣಿಜ್ಯ ಕೇಂದ್ರ ಮತ್ತು ಸಾರ್ವಜನಿಕರು ಸೇರುತ್ತಿದ್ದ ಸಾರ್ವಜನಿಕ ಸಭಾಸ್ಥಾನ ಇಂದಿನ ನಗರ ಕೇಂದ್ರವಾಗಿರುವ ಪಿಯಾಜಾ ಡೆಲ್ಲಾ ರಿಪಬ್ಲಿಕಾ. ನಗರದ ದಕ್ಷಿಣದ ಗುಡ್ಡಗಳಲ್ಲಿರುವ ಆಧುನಿಕ ನಿರ್ಮಾಣ ವಯಲ್ ಡಿ ಕಾಲಿ ವಿಹಾರಪಥದ ಪಿಯಾಸೆಲೆ ಮೈಕೆಲಾಂಜಿ ಯಾಲೊದಿಂದ ಕಾಣುವ ನದಿ, ಸೇತುವೆ, ಗುಮ್ಮಟ, ಮಾರುಕಟ್ಟೆ ಸುಂದರವಾದ ನಗರ ಚೌಕ ಮತ್ತು ವಿಶಾಲ ಬೀದಿಗಳ ದೃಶ್ಯ ಆಕರ್ಷಕವಾದದ್ದು. ಇಟಲಿಯ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನ ತೊಟ್ಟಿಲೆನಿಸಿದೆ  ಫ್ಲಾರೆನ್ಸ್ ಇಂದು ಪ್ರಪಂಚದ ಒಂದು ಮುಖ್ಯ ಕಲಾಕೇಂದ್ರವೆನಿಸಿದೆ. ಈ ನಗರದ ಸುತ್ತು ಮುತ್ತಲಿನ ಗುಡ್ಡಗಳಲ್ಲಿಯ ನೈಸರ್ಗಿಕ ದೃಶ್ಯ ಫ್ಲಾರೆನ್ಸಿನ ಮತ್ತೊಂದು ಮುಖ್ಯ ಆಕರ್ಷಣೆ. ನಗರದ ಸುತ್ತ ನಿಂತಿರುವ ತಸ್ಕನ್ ಗುಡ್ಡಗಳಲ್ಲಿ ಆರಾಮ ಗೃಹಗಳು, ಹೊಲಗದ್ದೆಗಳು, ದ್ರಾಕ್ಷಿ ಮತ್ತು ಹಣ್ಣಿನ ತೋಟಗಳಿವೆ. ನಗರದ ಕನಿಷ್ಠ ಉಷ್ಣತೆ 5(ಅ ಗರಿಷ್ಠ 35.7( ಅ ಚಳಿಯ ತೀವ್ರತೆಯಾಗಲಿ ಉಷ್ಣತೆಯ ಪ್ರಖರಯಾಗಲಿ ವರ್ಷದಲ್ಲಿ ಹೆಚ್ಚು ಕಾಣಬರುವುದಿಲ್ಲ. ಸಾಮಾನ್ಯವಾಗಿ ಆಹ್ಲಾದಕರ ವಾತಾವರಣವಿರುತ್ತದೆ. ಫ್ಲಾರೆನ್ಸ್ ವಿವಿಧ ಬಗೆಯ ಹೂಗಳಿಗೆ ಪ್ರಸಿದ್ಧ.

	ಜನಜೀವನ: ಫ್ಲಾರೆನ್ಸಿನ ಸಹಸ್ರಾರು ನಿವಾಸಿಗಳು ಉಪನಗರಗಳಲ್ಲಿಯ ಕಾರ್ಖಾನೆಗಳಲ್ಲಿ ದುಡಿಯುತ್ತಾರೆ. ಜೊತೆಗೆ ಪ್ರವಾಸೋದ್ಯಮ ಹಾಗೂ ಕಾಚು, ಮಣ್ಣು ಮತ್ತು ಕಬ್ಬಿಣ ಸಾಮಾನುಗಳ ಮತ್ತು ಚರ್ಮದ ವಸ್ತುಗಳ ಅಂತೆಯೇ ಬೆಳ್ಳಿ ಬಂಗಾರಗಳ ಆಭರಣಗಳ ತಯಾರಿಕೆ. ಕಲೆಗಳ ನಕಲುಗಳು, ಉನ್ನತಮಟ್ಟದ ಬಟ್ಟೆ ಮತ್ತು ಪಾದರಕ್ಷೆ ತಯಾರಿಕೆ ಮೊದಲಾದ ಸಾಂಪ್ರದಾಯಿಕ ಕಲಾ ಕೌಶಲಗಳು ಇಲ್ಲಿಯ ಜನರಿಗೆ ಮುಖ್ಯ ಜೀವನಾಧಾರಗಳಾಗಿವೆ. 1970ರ ದಶಕದ ಪ್ರಾರಂಭದಲ್ಲಿ ಸುಮಾರು 1,700,000 ಪ್ರವಾಸಿಗಳು ನಗರಕ್ಕೆ ಭೇಟಿ ಕೊಡುತ್ತಿದ್ದರೆಂದು ಅಂದಾಜು ಮಾಡಲಾಗಿದೆ. ಹಸ್ತ ಕೌಶಲದ ವಸ್ತುಗಳು ಎಲ್ಲೆಲ್ಲೂ ದೊರೆಯುತ್ತವೆ. ನಗರದಲ್ಲಿ ಹಿಂದಿನ ಅನೇಕ ಸಾಂಪ್ರದಾಯಿಕ ವ್ಯಾಪಾರಸ್ಥಳಗಳು ಉಳಿದುಕೊಂಡಿವೆ. ಪಾಂಟೆವೆಚಿಯೊ ಸೇತುವೆಯ ಮೇಲೆ ಚಿನ್ನಬೆಳ್ಳಿಗಳ ಕೆಲಸಗಾರರು ಮತ್ತು ಆಭರಣ ವ್ಯಾಪಾರಿಗಳು ಅಧಿಕಸಂಖ್ಯೆಯಲ್ಲಿದ್ದಾರೆ. ಫ್ಲಾರೆನ್ಸಿನಲ್ಲಿರುವ ಕೆಲವು ಐತಿಹಾಸಿಕ ಕಟ್ಟಡಗಳು ಮತ್ತು ಇತರ ಗಮನ ಸೆಳೆಯುವ ಸ್ಥಳಗಳಲ್ಲಿ ಮುಖ್ಯವಾಗಿ 1296 ಮತ್ತು 1436ರ ನಡುವೆ ನಿರ್ಮಿತವಾದ ಮತ್ತು ಇಟಲಿಯ ಅತಿ ದೊಡ್ಡ ಕ್ರೈಸ್ತ ಆರಾಧನಾಮಂದಿರಗಳಲ್ಲೊಂದಾಗಿರುವ ಸಾಂತಾ ಮಾರಿಯಾ ಡೆಲ್ ಫಿಆರ್ ಗಮನಾರ್ಹವಾದದ್ದು. ಹೊರಗೆ ಬಿಳಿದು, ಕೆಂಪು ಮತ್ತು ಹಸಿರು ಅಮೃತಶಿಲೆಗಳಿಂದ ವಿಶೇಷವಾಗಿ ಅಲಂಕೃತವಾಗಿರುವ ಈ ಆರಾಧನಾ ಮಂದಿರದ ಒಳಭಾಗವನ್ನು ಮೈಕೆಲಂಜೆಲೋ, ಗಿಬರ್ಟ್, ಸಾನೋವಿನೋ, ಡೆಲ್ಲಾ ರಾಬಿಯೋ ಮೊದಲಾದವರ ವಾಸ್ತುಶಿಲ್ಪ ಕೃತಿಗಳು ಹಾಗೂ ಎರಡು ಕಂಚಿನ ಬಾಗಿಲುಗಳು ಈ ಶೋಭಾಯಮಾನವಾಗಿ ಮಾಡಿವೆ. 1334 ಮತ್ತು 1387ರ ನಡುವೆ ನಿರ್ಮಿತವಾದ ಹಾಗೂ ಗೈಯೋಟೊನ ಅಸಾಮಾನ್ಯ ಗಂಟೆಯ ಗೋಪುರ ಸುಮಾರು 8.4 ಮೀಟರ್ ಎತ್ತರವಿದೆ. ಆರಾಧನಾಮಂದಿರದ ಪಶ್ಚಿಮ ತುದಿಯಲ್ಲಿ 1128ರ ತನಕವೂ ನಗರದ ಆರಾಧನಾ ಮಂದಿರವಾಗಿದ್ದ ಸ್ಯಾನ್‍ಗಾಯೊವೆನ್ನಿಯ ಅಷ್ಟಕೋನಾಕೃತಿಯ ಜ್ಞಾನಸ್ನಾನಶಾಲೆಯಿದೆ. ಅದರ ಮೂರು ಕಂಚಿನ ಬಾಗಿಲುಗಳ ಪೈಕಿ ಮೊದಲನೆಯದನ್ನು ನಿರ್ಮಿಸಿದ ಆ್ಯರಡ್ರೀಪಿಸಾನೋ. ಮೈಕೆಲಂಜೆಲೋ ಸ್ವರ್ಗದ ಬಾಗಿಲುಗಳೆಂದು ಕರೆದ. ಊಳಿದವೆರಡು ಗಿಬರ್ಟಿಯ ಮಹಾಕೃತಿಗಳು. ಸಾಂತಾ ಮಾರಿಯಾ ನಾವೆಲ್ಲಾ (1278-1350). ಫ್ಲಾರೆನ್ಸಿನ ಪ್ರಸಿದ್ಧ ಪುರುಷರ ಸ್ಮಾರಕ ಮಂದಿರವೆಂದು ಪ್ರಸಿದ್ಧವಾಗಿರುವ ಸುಂದರ ಫ್ರಾನ್ಸಿಸ್ಕನ್ ಆರಾಧನಾಮಂದಿರಗಳಲ್ಲೊಂದಾದ ಹಾಗೂ ಕೈಯಾಟೋನ ಭಿತ್ತಿಚಿತ್ರಗಳಿರುವ ಸಾಂತಾಕ್ರಾಸ್, ಮೈಕೆಲಂಜೆಲೊ ಹೊಸತಾಗಿ ನಿರ್ಮಿಸಿದ (1523-29) ಮೆಡಿಸಿಯ ಸಮಾಧಿ ಭವನ ಸೇರುವ ಸ್ಯಾನ್‍ಲಾರೆಂಜೋ, ಮಸಾಕಿಯೋನ ಭಿತ್ತಿಚಿತ್ರಗಳಿರುವ ಸಾಂತಾಮಾರಿಯಾ ಡೆಲ್ ಕಾರ್ಮೆನ್ ಫ್ರಾಏಂಜಲಿಕೋನ ಭಿತ್ತಿಚಿತ್ರಗಳಿರುವ ಸಂನ್ಯಾಸಿನೀ ಮಠವನ್ನೊಳಗೊಂಡಿರುವ ಸ್ಯಾನ್ ಮಾರ್ಕ್, ಆ್ಯಂಡ್ರೀ ಡೆಲ್ ಸಾರ್ಟೋನ ಭಿತ್ತಿಚಿತ್ರಗಳಿರುವ ಅವನ್ಸಿಯೇಶನ್ ಆರಾಧನಾಮಂದಿರ (1250), ಗೀರ್ಲಾಂಡಯೋನ ಭಿತ್ತಿಚಿತ್ರಗಳಿರುವ ಆರಾಧನಾಮಂದಿರ ಪವಿತ್ರ ದೈವದ ಆರಾಧನಾಮಂದಿರ, ಆರ್‍ಸ್ಯಾನ್ ಮೈಕೇಲನ ಆರಾಧನಾ ಮಂದಿರ ಮತ್ತು ಪ್ರಮುಖ ಕ್ರೈಸ್ತ ಆರಾಧನಾ ಮಂದಿರಗಳು. ಫ್ಲಾರೆನ್ಸಿನ ಬೀದಿಗಳು ಸಾಹಿತ್ಯ ಹಾಗೂ ಕಲೆಗಳ ಪುನರುಜ್ಜೀವನ ಕಾಲದ ಅರಮನೆ ಮತ್ತು ಮಹಲುಗಳಿಗೆ ಪ್ರಸಿದ್ಧವಾಗಿವೆ. ನಗರಸಭಾಭವನವಾಗಿರುವ ಕೋಟೆಯಂತಿರುವ ಭವ್ಯ ವಿಚಿಯೋ ಅರಮನೆಯನ್ನು (1298-1314) ಆರ್ನಾಲ್ಫೋ ಡಿ ಕಾಂಬಿಯೋ ಪ್ರಾರಂಭಿಸಿದ. ಮುಂದೆ ಅದನ್ನು ಜ್ಯಾರ್ಜಿಯೋ ವಸಾರಿ (1511-74) ವಿಸ್ತರಿಸಿದ. ಅದರ ಸುಂದರ ಗೋಪುರದಲ್ಲಿ ಡಾನಾಟೆಲೋ ಮತ್ತು ಮೈಕೆಲಂಜೆಲೋ ನಿರ್ಮಿಸಿದ ವಿಗ್ರಹಗಳಿವೆ. ವಸಾರಿ 1560ರಲ್ಲಿ ಪ್ರಾರಂಭಿಸಿದ ಯುಫಿಜಿ ಅರಮನೆಯಲ್ಲಿ ಸ್ಯಾಂಡ್ರೊ ಬಾಟಸಲ್ಲಿ, ರ್ಯಾಫೇಲ್ ಮತ್ತು ಮೈಕೆಲಂಜೆಲೋರ ಅನೇಕ ಕೃತಿಗಳೂ ಸೇರಿದಂತೆ ಇಟಲಿಯ ಅತಿಮಹತ್ತ್ವದ ವರ್ಣಚಿತ್ರಗಳನ್ನೊಳಗೊಂಡ ಯುಫಿಜಿ ಚಿತ್ರಶಾಲೆಯಿದೆ.

	ಬ್ರುನೆಲೆಸ್ಚಿಯ ಯೋಜನೆಯಂತೆ ನಿರ್ಮಿಸಲಾದ ಪಿಟ್ಟೆ ಅರಮನೆ ತಸ್ಕನಿಯಗ್ರ್ಯಾಂಡ್ ಡ್ಯೂಕರ ವಾಸಸ್ಥಾನವಾಗಿತ್ತು. ಅದರಲ್ಲಿ 15ರಿಂದ 18ನೆಯ ಶತಮಾನಗಳ ತನಕದ ವರ್ಣಚಿತ್ರಗಳ ಸಂಗ್ರಹವಿದೆ. ಅದರ ಹಿಂದೆ ಪ್ರಸಿದ್ಧ ಬಾಲಿ ಉದ್ಯಾನವಿದೆ. ಸ್ಟ್ರಾಜಿ ಅರಮನೆ, ಅಲ್ಬರ್ಟಿ ಯೋಜಿಸಿದ ರೂಸೆಲೈ ಅರಮನೆ ಹಾಗೂ ಮೈಕೆಲಂಜೆಲೋ ನಕ್ಷೆಹಾಕಿದ ಮೆಡಿಸಿರಿಕಾರ್ಡಿ ಅರಮನೆ ಇವು ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ತವಾದವು. ಫ್ಲಾರೆಂಟೈನ್ ಅಕ್ಯಾಡೆಮಿಯ ಮೊದಲನೆಯ ಮಹಡಿ ಮೈಕೆಲಂಜೆಲೋನ ವಾಸ್ತುಶಿಲ್ಪಕ್ಕೆ ಮೀಸಲಾಗಿದೆ. ಇಲ್ಲಿಯ ಪ್ರಾಚೀನ ವಸ್ತು ಸಂಗ್ರಹಾಲಯದಲ್ಲಿ ಇಟ್ರುರಿಯ ದೇಶದ ಮತ್ತು ಗ್ರೀಕೋರೋಮನ್ನರ ವಾಸ್ತುಶಿಲ್ಪದ ಸುಂದರ ಕೃತಿಗಳ ಸಂಗ್ರಹವಿದೆ. ಪುರಾತನ ಗಣರಾಜ್ಯದ ಮುಖ್ಯ ನ್ಯಾಯಾಲಯವಾಗಿದ್ದ ಬಾರ್ಗೆಲ್ಲೋದೊಳಗಿರುವ (13ನೆಯ ಶತಮಾನ) ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಡಾನಾಟೆಲ್ಲೋನ ಕಲೆಯ ಮಾದರಿಗಳನ್ನೊಳಗೊಂಡು ಮಧ್ಯಯುಗದ ಹಾಗೂ ಪುನರುಜ್ಜೀವನ ಕಾಲದ ಸುಂದರ ಕೃತಿಗಳಿವೆ. ಫ್ಲಾರೆನ್ಸಿನಲ್ಲಿ ಒಟ್ಟು 40 ವಿವಿಧ ವಸ್ತುಸಂಗ್ರಹಾಲಯಗಳಿವೆ. ಇಲ್ಲಿರುವ 9 ಮುಖ್ಯ ಗ್ರಂಥಾಲಯಗಳಲ್ಲಿ ಬಿಬ್ಲಿಯಾಟಿಕಾ ನ್ಯಾಶನೇಲಿನಲ್ಲೆ (1747) 3,500,000 ಗ್ರಂಥಗಳೂ ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ 1,400,000 ಗ್ರಂಥಗಳೂ ಇವೆ. ಇಟಲಿಯ ಪುರಾತನ ವಿಶ್ವವಿದ್ಯಾಲಯಗಳಲ್ಲಿ ಫ್ಲಾರೆನ್ಸಿನ ವಿಶ್ವವಿದ್ಯಾಲಯವೂ ಒಂದು ಇಟಾಲಿಯನ್ ಭಾಷೆಯ ಅಧ್ಯಯನಕ್ಕೆ ಮೀಸಲಾಗಿರುವ ಅಕ್ಯಾಡೆಮಿ ಡೆಲ್ಲಾ ಕ್ರುಸ್ಕಾ ಹಾಗೂ ಸೊಸೈಟಾ ಡಾಂಟೆಸ್ಕಾ ಮೊದಲಾದ ವಿದ್ವತ್ ಸಂಘಗಳೂ ಇವೆ.
(ಜಿ.ಕೆಯು.ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ